ಡೆನಿಯರ್ -
	ನೂಲಿನ ರೇಖಾಸಾಂದ್ರತೆಯನ್ನು ಸೂಚಿಸುವ ಒಂದು ಏಕಮಾನ. ನೂಲಿನ ಉದ್ದ ಮತ್ತು ತೂಕಕ್ಕೆ ಇರುವ ಸಂಬಂಧವನ್ನು ಮೆಟ್ರಿಕ್ ಅಳತೆಗಳಲ್ಲಿ. ಇದು ಸೂಚಿಸುತ್ತದೆ: 9000 ಮೀಟರ್ ಉದ್ದದ ನೂಲಿನ ತೂಕ 1 ಗ್ರಾಮ್ ಆದಾಗ, ಆ ತೂಕವನ್ನು ಆ ನೂಲಿನ ಡೆನಿಯರ್ ಎಂದು ಸಂಬೋಧಿಸುತ್ತಾರೆ. ಬಟ್ಟೆಯ ಉತ್ಪಾದನೆಗೆ ಬಳಸುವ ಸಂಶ್ಲೇಷಿತ ನೂಲಿನ ನವುರು ಗುಣವನ್ನು ತಿಳಿಸಲು ಡೆನಿಯರ್ ಪದ್ಧತಿಯನ್ನು ಬಳಸುವುದಿದೆ. ಉದಾಹರಣೆಗೆ, ರೇಷ್ಮೆ ನೂಲುಗಳನ್ನು 13/15 ಡೆನಿಯರ್, 18/22 ಡೆನಿಯರ್ ಮತ್ತು 28/32 ಡೆನಿಯರ್ ಎಂದು ಮುಂತಾಗಿ ಕರೆಯುವುದುಂಟು. 28/32 ಡೆನಿಯರ್ ರೇಷ್ಮೆ ನೂಲು 18/22 ಡೆನಿಯರ್ ರೇಷ್ಮೆ ನೂಲಿಗಿಂತಲೂ ಒರಟು. ಹೀಗೆಯೇ 18/22 ಡೆನಿಯರ್ ರೇಷ್ಮೆ ನೂಲು 13/15 ಡೆನಿಯರ್‍ದಕ್ಕಿಂತ ಒರಟು- ಹೀಗೆ. ನೈಲಾನ್ ಮುಂತಾದ ಮಾನವಕೃತ 100 ಡೆನಿಯರ್ ಮತ್ತು ಅದಕ್ಕೂ ಕಡಿಮೆ ಡೆನಿಯರ್ ತಂತುನೂಲುಗಳನ್ನು ಬಟ್ಟೆಯ ತಯಾರಿಕೆಯಲ್ಲಿ ಬಳಸುತ್ತಾರೆ. ಹಗ್ಗ, ಟೈರಿನ ರಜ್ಜುಗಳು, ಬಿರಿಹುರಿಗಳು, ಹೆಣೆಗೆ ಪಟ್ಟಿ ಮೊದಲಾದವುಗಳ ಉತ್ಪಾದನೆಯಲ್ಲಿ 100 ಡೆನಿಯರ್‍ಗಳಿಗೂ ಹೆಚ್ಚಿನ ಮಾನವಕೃತ ತಂತುನೂಲುಗಳ ಬಳಕೆ ಇದೆ.
(ಡಿ.ವಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ